ಶುಕ್ರವಾರ, ಡಿಸೆಂಬರ್ 18, 2009

ನನ್ನವನ ಹುಡುಕಾಟದಲ್ಲಿ...?!

ಮನಸಲ್ಲಿ ಅದೇನೋ ಒಂದು ಮಾತು ತೊದಲುತಿತ್ತು.ಕಣ್ಣಲ್ಲಿ ಅದೇನೋ ಒಂದು ಸಂಭ್ರಮ ನಲಿಯುತ್ತಿತ್ತು.ಹೃದಯ ಇನ್ನೆಲ್ಲಿ ನಾನು ಕಳೆದು ಹೋಗುವೆನೋ ಎಂಬ ಭಯವನ್ನು ಹೊತ್ತು ತಿರುಗುತ್ತಿತ್ತು.ಅದೆಷ್ಟು ಹೃದಯಗಳ ಬಳಿ ಹೋಗಿ ಬಂದೆ ಗೊತ್ತಾ ನಾನು? ಇವತ್ತಿನ ಈ ಕ್ಷಣದವರೆಗು ಪ್ರತಿಯೊಂದು ಹೃದಯದ ಬಾಗಿಲ ಬಳಿ ಹೋದಾಗಲು ನನ್ನ ಹೃದಯ " ಇವನಲ್ಲ ಬಿಡು " ಎಂದು ತಣ್ಣಗೆ ಎಚ್ಚರಿಸುತಿತ್ತು.ಈಗ ನೀನು ನನ್ನೆದುರು ನಿಂತು ಅರೆ ಕ್ಷಣ ಅಷ್ಟು ಆಳವಾಗಿ ನೋಡಿದ್ಯಲ್ಲ ಆಗಲೇ " ನಿನ್ನ ಹುಡುಕಾಟ ನಿಲ್ಲಿಸು" ಎಂಬ ಸಂದೇಶ ಹೃದಯದಿಂದ ರವಾನೆಯಾಯಿತು. ಆ ಕ್ಷಣ ಆನಂದದ ಪರಮಾವದಿಯಲ್ಲಿ ನಾನಿದ್ದೆ. ಅದೊಂದು ಖುಷಿಯ ಯವ್ವೌನ ! ರೋಮಾಂಚನದ ಉತ್ತುಂಗ ! ನಿಂತಲ್ಲೆ ತೇಲಾಡುವಂತಹ ಮೈ ಮರೆವು! ವಾಸ್ತವದ ಅರಿವಿಲ್ಲದೆ ನನ್ನನ್ನು ನಾನೇ ಕಳೆದುಕೊಂಡ ಅವಿವೇಕ! ನನ್ನ ಬದುಕಿನ ಪರಮಗುರಿಯೇ ಇದೇನೋ ಎಂಬಂತಹ ಧನ್ಯತೆಯ ಪಲುಕು! ಎಷ್ಟು ಚೆಂದ ಈ ಹೃದಯಗಳ ವಿಷಯ....!! "ಇಂತಹ ಪುಣ್ಯ ನನ್ನ ಜೀವನದಲ್ಲಿ ಪದೇ ಪದೇ ಒದಗಿಬರಲಿ ....ಅದೂ ನಿನ್ನೊಂದಿಗೆ" !.ಆ ಕ್ಷಣ ಮನ ಬಯಸಿಬಿಟ್ಟಿತ್ತು.


ದೀರ್ಘವಾಗಿ ನಾಚಿಕೆ ಬಿಟ್ಟು ನಿನ್ನ ಕಣ್ಣಲ್ಲಿ ಒಮ್ಮೆ ಇಣುಕಿದೆ. ಏನೋ ಹುಡುಕುವಂತಹ ಪುಟ್ಟದೊಂದು ನಾಟಕ.ಉಲ್ಲಾಸ ಮಿತಿ ಮೀರಿತ್ತು. ನಾ ಕಂಡು ಕೊಂಡೆ ನಿನ್ನೊಳಗಿದ್ದ ನನ್ನೆಡೆಗಿನ ಮೆಚ್ಚುಗೆಯನ್ನು. ಕಾತರವಿತ್ತು , ಅಂಜಿಕೆಯಿತ್ತು , ಭಯವಿತ್ತು ನನ್ನಲ್ಲಿ. ಹೌದು, ನಾ ಎನಾದರು ಹೇಳಲೆಬೇಕು , ಏನಾದರು ಕೇಳಲೆಬೇಕು......ಈ ಸಮಯ ಬಿಟ್ಟರೆ ಇನ್ನೊಮ್ಮೆ ನಾ ನಿನ್ನ ಹುಡುಕಲು ಸಾಧ್ಯವೇ ಇಲ್ಲ , ಇದ್ದರೂ ಆಗಿನ ಸ್ಥಿತಿಗತಿಗಳು ಹೇಗಿರುವುದೋ....? ನಿನ್ನ ಹಿನ್ನೆಲೆ ನನಗೆ ತಿಳಿದಿಲ್ಲ. ಆದರೂ ನಾ ಹುಡುಕುತ್ತಿದ್ದವನು "ನೀನೆ" ಎಂದು ಹೃದಯ ಅಂಗೀಕರಿಸಿದೆ. ಈ ನಿಮಿಷದಲ್ಲಿಯೇ ನಾ ಏನಾದರೊಂದು ನಿರ್ಧರಿಸಬೇಕು. ಆದರೆ ಹೇಗೆ.....?? ನಾ ಏನ ಹೇಳಲಿ , ನಾ ಏನ ಕೇಳಲಿ..? ಇದೇ ಮೊದಲ ಬಾರಿ ಈ ಸಮಾರಂಭದಲ್ಲಿ ನಾನು ಚಿಕ್ಕಮ್ಮ ಮತ್ತು ಗೆಳತಿಯ ಕೈ ಬಿಟ್ಟು ಬಂದಿದ್ದೆ...ಅವರೀಗ ನನ್ನನ್ನೇ ಹುಡುಕುತ್ತಿದ್ದಾರೆ.ಆದರೆ ನಾನೀಗ ನಿನ್ನಲ್ಲೆ ಸ್ಥಗಿತ!!!. ನೀನೇ ಏನಾದ್ರು ಹೇಳೋ........ಏನಾದ್ರು ಕೇಳೋ........ನನ್ನ ಹೆಸರು , ನಮ್ಮನೆ ವಿಳಾಸ ಏನು ಬೇಡವಾ ನಿಂಗೆ........? ಎಂದು ಅದೆಷ್ಟು ಹಂಬಲಿಸಿತ್ತು ಮನ..! ನಿನ್ನ ಗೆಳೆಯರು ನಿನಗಾಗಿ ಕಾಯುತ್ತಿರುವುದು, ಛೇಡಿಸುವುದು ಎಲ್ಲ ಗೊತ್ತಿತ್ತು ನಂಗೆ. ಗೊತ್ತಿಲ್ಲದ್ದು ಈ ಕ್ಷಣ ನಾನೇನೋ ಮಾತನಾಡಬೇಕಿತ್ತಲ್ಲ ಅದೇನು ಎಂಬುದಷ್ಟೆ.! ಅಯ್ಯೋ ಪ್ರಥಮ ನೋಟದ ಪ್ರೀತಿಯೆ....ಫಜೀತಿಯೇ........!!

ಯೋಚಿಸೋಕ್ಕೆ ಸಮಯ ಇಲ್ಲ , ಬಿಟ್ಟು ಬಂದವರ ಕಣ್ಣಿಗೆ ಕಾಣಿಸಿದರೆ ಸೀದಾ ಕೈ ಹಿಡ್ಕೊಂಡು ಎಳ್ಕೊಂಡು ಹೋಗ್ತಾರೆ.
ಏನ್ಮಾಡೋದು....? ಅಂತೂ ಕಷ್ಟಪಟ್ಟು " ಹಲೋ....." ಅಂದೆ. ಅವನೂ "ಹಲೋ" ಅಂದ. ಈಗ ಮತ್ತೆ ಮೌನ! "ಸುಮ್ನಿರುವಾಗೆಲ್ಲ ಮಾತಾಡ್ತಿಯ ...ಈಗೇನಾಗಿದೆ ನಿಂಗೆ..? ಹೇಳು....ಹೇಳು......ಎಂದು ಮನಸ್ಸು ಒಂದೇ ಸಮನೆ ಪುಟಿಯುತಿತ್ತು. ಕೊನೆಗೂ ಕಷ್ಟಪಟ್ಟು ಕಣ್ಮುಚ್ಚಿ " ನಾನು ನಿಮ್ ಜೊತೆ ಸ್ವಲ್ಪ ಮಾತಾಡ್ಬೇಕು" ಅಂದೆ. ಅವನು ಒಂದೇ ತೀಕ್ಷ್ಣ ನೋಟದಲ್ಲಿ ಗದರಿಸಿಬಿಟ್ಟ. " ನಂಜೊತೆ ನಿಂದೇನ್ ಮಾತು " ಎಂಬತಿತ್ತು ಅವನ ನೋಟ.ಆದರೂ ಸುಮ್ಮನಾಗಲು ನನ್ನಿಂದ ಸಾಧ್ಯವಾಗಲಿಲ್ಲ. ಎಷ್ಟೆಲ್ಲ ಕಷ್ಟ ಪಟ್ಟು ಹುಡುಕಿದ್ದೆ ನಿನ್ನ .ನೀನೀಗ ಸಿಕ್ಕಿದಿಯ.....ನಾ ಹೇಗೆ ಸುಮ್ಮನಿರಲಿ....? ನಿಂಗಾದ್ರು ಬುದ್ಧಿ ಬೇಡವಾ...? ನಿಂಗೇನು ಅನ್ಸೋದೆ ಇಲ್ಲವಾ........? ಅಳು ಬರುವುದೊಂದೆ ಬಾಕಿ ನನಗೆ.ಹಾಗೇ ಒಮ್ಮೆ ದೀರ್ಘವಾಗಿ ನೋಡಿ ಪುಟ್ಟದಾದ ನಗೆಯೊಂದ ಕೊಟ್ಟು ನನ್ನನ್ನು ಪಕ್ಕಕ್ಕೆ ಸರಿಸಿ ನಡೆಯಲು ಮುಂದಾದ .ಮತ್ತೆ...ಅದೂ....ನಾನು... ಮಾತೂ ....ಎಂದೆ. ಸ್ವರದಲ್ಲಿ ನಡುಕವಿದ್ದರೂ ವಿಚಾರದಲ್ಲಿ ಗಂಭೀರತೆ ಇತ್ತು. ಏನಾಯಿತೋ ಹುಡುಗನಿಗೆ, ಹೆಚ್ಚು-ಕಮ್ಮಿ ತಳ್ಳಿಕೊಂಡೆ ಹೊರಟುಬಿಟ್ಟ.

ಇವನ ಹೃದಯದ ಆರೋಗ್ಯ ಸರಿ ಇಲ್ಲವಾ...? ಇಷ್ಟು ದಿನ ಕಾದಿದ್ದು ಇವನಿಗಾಗ....? ಅಯ್ಯೋ ದೇವರೆ ಇಂತಹ ಕೋಪಿಷ್ಟನ ಮೇಲೆ ನಂಗೆ ಪ್ರೀತಿ ಬರಬೇಕಿತ್ತಾ...? ಕೋಪ, ಅವಮಾನವೆಲ್ಲ ಒಟ್ಟಿಗೇ ನೆತ್ತಿಗೇರಿತ್ತು.ಇಷ್ಟಾದರು "ಅವನೇ ನನ್ನವನು" ಎಂಬುದು ಸ್ಪಷ್ಟವಾಗಿ ಹೃದಯದಲ್ಲಿ ಮುದ್ರಿಸಿತ್ತು ಮನಸ್ಸು.ಯಾಕೋ ನಾನು ನನಗೇ ತುಂಬ ಪಾಪ ಅನ್ನಿಸಿಬಿಟ್ಟೆ. ಒಂದು ಸಾರಿ ಅಸಹಾಯಕಳಾಗಿ ಅವನು ಹೋದ ದಿಕ್ಕಿನೆಡೆ ತಿರುಗಿ ನೋಡಿದೆ. ಅರೆ...!! ಅವನಿನ್ನೂ ಹೋಗಿಲ್ಲ..!? ಒಂದು ಹೆಜ್ಜೆ ನನ್ನೆಡೆಗೆ ಮುಂದಿಟ್ಟು " ನಾಡಿದ್ದು ಭಾನುವಾರ ಸಂಜೆ ನಿಮ್ಮನೆಗೆ ಬರ್ತಾ ಇದೀನಿ, ಅಪ್ಪ- ಅಮ್ಮನ ಜೊತೆಗೆ. ಅಲ್ಲೇ ಮಾತಾಡೋಣ ". ಎಂದು ಕಣ್ಣಲ್ಲಿಷ್ಟು ಪ್ರೀತಿಯ ತೋರಿಸಿ ನನ್ನಲ್ಲಿದ್ದ ಪ್ರೀತಿಯನ್ನೂ ಉಳಿಸಿ ನಡೆದುಬಿಟ್ಟ! ಆ ಕ್ಷಣ ಸ್ವರ್ಗ ನನ್ನಲ್ಲಿತ್ತು.

1 ಕಾಮೆಂಟ್‌:

  1. ಅಂಬಿಕಾ,
    ಸಂಗಾತಿಯ ಹುಡುಕಾಟದ ಲೇಖನ ಚೆನ್ನಾಗಿದೆ
    ನಿಮ್ಮ ಬರಹದ ಶೈಲಿ ಇಷ್ಟವಾಯಿತು
    ಹೀಗೆಯೇ ಮುಂದುವರಿಸಿ
    ನಿಮ್ಮಿಂದ ಇನ್ನಷ್ಟು ಬರಹ ನಿರೀಕ್ಷಿಸುತ್ತೇನೆ
    ಕೆಳಗಿನ ಸಾಲುಗಳು ಸೂಪರ್
    ''ಕಣ್ಣಲ್ಲಿಷ್ಟು ಪ್ರೀತಿಯ ತೋರಿಸಿ ನನ್ನಲ್ಲಿದ್ದ ಪ್ರೀತಿಯನ್ನೂ ಉಳಿಸಿ ನಡೆದುಬಿಟ್ಟ! ಆ ಕ್ಷಣ ಸ್ವರ್ಗ ನನ್ನಲ್ಲಿತ್ತು'

    ಪ್ರತ್ಯುತ್ತರಅಳಿಸಿ