ಶನಿವಾರ, ಏಪ್ರಿಲ್ 17, 2010

ಮಾತು ಬಲ್ಲವರೆ ಎಲ್ಲ...!

ಅನುಭೂತಿ ಉಸಿರು ಸಿಕ್ಕಿಕೊಂಡು



ಎದೆಗೂಡಲ್ಲಿ ನರಳುತ್ತಿದೆ.


ಜೀವ ಸಾಯುತ್ತ ಸಾಯುತ್ತಾ


ಬದುಕುವ ಕಾತರದಲ್ಲಿದೆ.


ನಾಲ್ಕು ದಿಕ್ಕುಗಳ ಮಧ್ಯೆ ನಿಂತ


ಅನಾಥ ಮನ ತನ್ನ ದಾರಿ ಅರಸುವ ವೇಳೆ,


ಜಗತ್ತಲ್ಲಿ ಅವರವರದ್ದು ಅವರವರಿಗೆ...


ಎಲ್ಲ ಮಾತು ಬಲ್ಲವರೇ...ಮೌನಕ್ಕಿಲ್ಲಿ......?


ವಾತ್ಸಲ್ಯ , ಪ್ರೇಮ, ವಿಶ್ವಾಸ ಹೀಗೆ...


ಎಲ್ಲವೂ ಕೊಡುವ ಬಿರುದು, ಸನ್ಮಾನಗಳ


ಮೂಟೆಯ ಭಾರ ಹೆಗಲೇರುತ್ತಿದೆ.


ಕಳಚಿಟ್ಟು ನಡೆಯುವಂತಿಲ್ಲ...


ಹರಿದು ಹಂಚಿಹೋಗಲು ಮೊದಲೇ


ಅನಾಥ ಇನ್ನೊಂದಿಷ್ಟು ಅನಾಥವಾದರೆ...?


ಎಲ್ಲವನ್ನು ಒಪ್ಪಲು, ಅಪ್ಪಲು,


ನಾ ಭೂಮಿಯಾಗಬಾರದಾ...


ಭೂಮಿಯಲ್ಲೂ ಬಿರುಕುಗಳು ಕಾಣಿಸಿಕೊಂಡಿವೆ.


ಮುಗಿಯದ್ದೂ ಕೂಡ ಎಲ್ಲೋ ಒಂದೆಡೆ
 
ಮುಗಿಯಬಹುದೇನೋ..

ಸೋಮವಾರ, ಮಾರ್ಚ್ 22, 2010

ಸುಳಿವು ಇನ್ನಿಲ್ಲದಂತೆ...?

ಬಿರುಕು ಬಿಟ್ಟ ಭೂಮಿಯಲ್ಲಿ


ನಾ ನಡೆವಾಗ ಹಸಿಯಾದ ನೆಲ

ನಿನ್ನ ನೆನಪು...

ನೆರಳಿಲ್ಲದ ದಾರಿಯಲಿ ನಾ

ದಣಿದು ಕುಳಿತಾಗ ಕರಿಮೋಡ ತಂದ

ಮಳೆ ಹನಿ ನಿನ್ನ ನೆನಪು...

ನಿನ್ನ ನೆನಪುಗಳು ಕೊಟ್ಟ ಉಸಿರೆದುರು

ನಾ ಶೂನ್ಯ...

ನಿನ್ನ ನೆನಪುಗಳು ಇಟ್ಟ ಬೆಳಕಿನೆದುರು

ನಾ ಧನ್ಯ...

ಎಲ್ಲವನು ಮೀರಿ ಹೊರಟ ನನ್ನ

ಬಚ್ಚಿಟ್ಟುಬಿಡು ನಿನ್ನೊಡಲಾಳದ ಚಿಪ್ಪಲ್ಲಿ.

ಸುಳಿವು ಇನ್ನಿಲ್ಲದಂತೆ...!

ಬಸ್ಸು ಕಂಡೊಡನೆ...!

ಜೀವನವಿಡಿ ಜೊತೆಗೇ


ನಡೆಯುತ್ತೇನೆ ಎಂದ.

ಬಿಸಿಲಿತ್ತು, ದಣಿವೂ ಆಗಿತ್ತು

ಬಸ್ಸು ಕಂಡೊಡನೆ ಬಿಟ್ಟು ಹೋದ...???

ಆತ್ಮ ಬಂಧು

ಇದ್ದಕ್ಕಿದ್ದಂತೆ ಎದ್ದು ಹೋದ ಮನ


ಅಲೆದಾಡಿದ್ದು ಸಾಕೆನಿಸಿ ಮರಳಿತ್ತು.

ಸಿಗಲಿಲ್ಲವಾ ನಿನ್ನಾತ್ಮ ಬಂಧು...?

ಕೇಳಿದ್ದೆ ನಾ ಮುಗುಳು ನಗುತ್ತಾ..

ಅವನಲ್ಲಿಲ್ಲವಂತೆ, ಇತ್ತ ಕಡೆ ಹೊರಟು

ಎಷ್ಟೋ ಕ್ಷಣವಾದವಂತೆ...

ಮುಗ್ಧವಾಗೆಂದು ಕಣ್ಣರಳಿಸಿರೆ

ಅವಿತಿದ್ದ ಆತ್ಮ ಬಂಧುವ ಕಂಡು

ಮನಸಿನಾತ್ಮ ಅರಳಿತ್ತು...!

ಶಬರಿಯಾಗುವುದು...!?

ಕಾಯಲೇಬೇಕು ಪ್ರೀತಿಯ ಪಾದ ಸ್ಪರ್ಶಕ್ಕೆ


ನಿರೀಕ್ಷೆ ಹುಸಿಗೊಂಡರೂ ಮತ್ತೆ ಪ್ರೀತಿಯಿಂದ,

ಸಹಿಸಲೇಬೇಕು ಕಾಯುವ ದಣಿವನ್ನು

ಕಂಡನಂತರದಾನಂದದ ನೆನಪಿನಿಂದ,

ಶುದ್ಧಿಗೊಳಿಸಲೇಬೇಕು ಮನದ ಹಾದಿಯ

ಅವನ ಮೇಲಿನ ಅಧಮ್ಯ ಭಕ್ತಿಯಿಂದ,

ಹುಡುಕಿ ತರಲೇಬೇಕು ಒಂದಿಷ್ಟು ರುಚಿಗಳ

ಅವನ ಸಂತೈಸಲು ಹಸಿವಿಂದ,

ಹಿಡಿದಿಡಲೇಬೇಕು ಹೊರಟ ಹೃದಯವ

ಕ್ಷಣಕಂಡು ಮುಕ್ತಿಪಡೆವ ತವಕದಿಂದ,

ಇಷ್ಟಾದರು ಕಾಣದಿಲ್ಲಿ ಅತಿಶಯೋಕ್ತಿ...

ಸೃಷ್ಟಿಯ ಪ್ರೇಮಾಮೃತ ತೋರಿಸಿ

ಮರೆಸುವ ಸಂಕಷ್ಟಗಳ ಮುಂದೆ

ಶಬರಿಯಾಗುವುದು ಸುಮ್ಮನೆಯೇ...???

ಸೃಷ್ಟಿಯ ಒಗಟ...!?

ಕೊರೆದ ಕಲ್ಲಿನ ಮೇಲೆ ಹೇಗೋ


ಚಿಗುರಿದ ಮರದ ಮನದಲ್ಲಿ,

ಇಟ್ಟಿಗೆ,ಮರಳ ಕಂಡು ಮುಗುಳು ನಗು...!

ಅರೆರಾತ್ರಿ ಕತ್ತಲಲಿ ಮಿನುಗೋ

ಬಣ್ಣದ ದೀಪಗಳ ಝಳಕ್ಕೆ,

ತಂಬೆಳಕ ಎದೆಯೊಳು ಕಿರು ನಗು...!

ಇವಳು ಚಿಮ್ಮಿಸಿದ ಹಸಿರು ಸೀರೆ

ನೆರಿಗೆಯ ಅಂಚು ಚಿಗುರ ತಾಕಿ
ನೆಲದ ಒಡಲಲ್ಲಿ ನಿಲ್ಲದ ನಗು...!

ಮನೆಯೊಳಗಿಟ್ಟ ತತ್ವ-ಸಿದ್ಧಾಂತಗಳ

ಕಂತೆ ಕಂತೆಯ ಮೇಲೆ ಬಿದ್ದ

ಬೆಳಕೊಳು ಮುಗಿಯದ ನಗು...!

ನಿಲುಕದ ಒಗಟ ಬಿಡಿಸಲು ಹೊರಟ

ಅವನ ಕಂಡು ಸೃಷ್ಟಿಗೆ...???

ಶುಕ್ರವಾರ, ಮಾರ್ಚ್ 5, 2010

ನನ್ನ ಅಸ್ತಿತ್ವ.....ನಿನ್ನಲ್ಲಿ..!???

ನಿನ್ನ ಮೌನದಲ್ಲಿ ನನ್ನ ಕೊಲ್ಲುವ


ಸುಂದರವಾದ ಆಸೆ ನಿನಗೆ...

ಕೊಲ್ಲುವವ ನೀನೆ ಆದ್ದರಿಂದ

ಸಾಯಲು ಸಿಹಿ ಒಪ್ಪಿಗೆ ನನಗೆ..!!

ನಿನ್ನಂತಯೇ ನಾನು ಗೆಳೆಯಾ.....

ನಾನೂ ಹುಡುಕುವೆ, ಸೋಲುವೆ,

ಹಂಬಲಿಸಿ ಆಗಾಗ ಸಾಯುವೆ.

ನಿನಗೆ ನಾ ಸಿಗದೆ ವೇಳೆ ನನ್ನ ವಾಸ್ತವ

ಜೀವ ತೆಗೆದು ನನ್ನ ಬದುಕಿಸುತ್ತದೆ.

ಮತ್ತೆ ಉಸಿರಿರುವ ಬದುಕಿಗಾಗಿ

ನಿನ್ನ ನೆರಳ ತಾಕುತ್ತೇನೆ.......!

ನಿನ್ನ ನೆರಳೊಂದಿಗೆ ನಾನಿಟ್ಟ ನರಳಾಟ

ನನ್ನನ್ನೇ ಮತ್ತಷ್ಟು ಕೊರಗಿಸುತ್ತದೆ.!!?

ಮತ್ತೆ ಸಂದಿಸಿ ಬರುತ್ತೇನೆ ಒಂದಷ್ಟು ದೂರ,

ಸಾವಿನ ಆತಂಕದಲ್ಲೇ......

ಕಾಲದಲ್ಲಿ ಎಲ್ಲವೂ ಲೀನವಾಗುವ ವೇಳೆ

ನಾವು ಯಾವ ತೀರ ತಲುಪುವೆವೋ

ಎಂಬ ಆತಂಕ, ದುಗುಡ.....,

ಆದರೂ ಬರುತ್ತೇನೆ ಬಿಟ್ಟು ಹೋಗಬೇಡ!!??